ಹೆಳವನಕಟ್ಟೆ ಗಿರಿಯಮ್ಮ
From Wikipedia
ಹೆಳವನಕಟ್ಟೆ ಗಿರಿಯಮ್ಮ ಕ್ರಿ.ಶ.೧೭೫೦ರ ಸುಮಾರಿಗೆ ಜೀವಿಸಿದ್ದಳು. ಇವಳ ತವರೂರು ಹಾವೇರಿ ಜಿಲ್ಲೆಯ ರಾಣಿಬೆನ್ನೂರು. ತಾಯಿ ತುಂಗಮ್ಮ ; ತಂದೆ ಬಿಷ್ಟಪ್ಪ ಜೋಯಿಸರು. ಇವರಿಗೆ ದಿರ್ಘ ಕಾಲದ ನಂತರ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ, ಹೆಣ್ಣು ಮಗುವಿನ ಜನನವಾಯಿತು. ತಿಮ್ಮಪ್ಪನ ಅನುಗ್ರಹದ ಸಂಕೇತವಾಗಿ ಮಗುವಿಗೆ “ಗಿರಿಯಮ್ಮ” ಎಂದು ಹೆಸರನ್ನಿಟ್ಟರು.
ಪರಿವಿಡಿ |
[ಬದಲಾಯಿಸಿ] ಬಾಲ್ಯ
ಚಿಕ್ಕಂದಿನಿಂದಲೂ ಗಿರಿಯಮ್ಮ ಸ್ತೋತ್ರಪಾಠಗಳಲ್ಲಿ , ಪೂಜಾಕಾರ್ಯಕ್ಕೆ ನೆರವಾಗುವದರಲ್ಲಿ ಜಾಣೆಯಾಗಿದ್ದಳು. ಇವಳಿಗೆ ೪ ವರ್ಷ ವಯಸ್ಸಾದಾಗ ತಾಯಿ ತೀರಿಕೊಂಡರು. ತಾಯಿಯ ಹಿಂದೆಯೆ ತಂದೆ ಸಹ ಗತಿಸಿದರು. ಗಿರಿಯಮ್ಮ ಚಿಕ್ಕಮ್ಮ , ಚಿಕ್ಕಪ್ಪರ ವಾತ್ಸಲ್ಯದ ಆಶ್ರಯದಲ್ಲಿ ಬೆಳೆದಳು. ಬೆಳೆಯುತ್ತಿದ್ದಂತೆ ಗಿರಿಯಮ್ಮ ದೇವರ ಹಾಡುಗಳನ್ನು ಹಾಡುತ್ತ ನರ್ತಿಸುವದರಲ್ಲಿ ಪರವಶಳಾಗತೊಡಗಿದಳು. ತನ್ನ ಬಳಗದವರೊಂದಿಗೆ ಇವಳೊಮ್ಮೆ ಮಲೇಬೆನ್ನೂರಿಗೆ ಹೋದಾಗ ಅಲ್ಲಿಯ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಳು. ಉಡುಪಿ ಯಾತ್ರೆಗೆಂದು ಆ ಮಾರ್ಗವಾಗಿ ಹೋಗುತ್ತಿದ್ದ ಗೋಪಾಲದಾಸರ ಅಕಸ್ಮಾತ್ ದರ್ಶನ ಹಾಗು ಅನುಗ್ರಹ ಈ ಬಾಲೆಗೆ ಆಯಿತು.
[ಬದಲಾಯಿಸಿ] ವಿವಾಹ
ಆ ಕಾಲದ ಸಂಪ್ರದಾಯದಂತೆ ಗಿರಿಯಮ್ಮನ ಮದುವೆ ಬಾಲ್ಯದಲ್ಲೆ ,ಮಲೇಬೆನ್ನೂರಿನ ಶ್ಯಾನುಭೋಗರಾದ ಕೃಷ್ಣಪ್ಪನವರ ಮಗ ತಿಪ್ಪರಸನೊಡನೆ ಜರುಗಿತು. ಗಿರಿಯಮ್ಮನ ಮನಸ್ಸು ರಂಗನಾಥಸ್ವಾಮಿಯಲ್ಲಿಯೆ ನಿಂತುಹೋಗಿತ್ತು. ಅವಳು ಲೌಕಿಕ ಸಂಸಾರ ವಿಮುಖಳಾಗಿದ್ದಳು. ಅವಳ ಪತಿ ತಿಪ್ಪರಸ ಅವಳ ಮನಸ್ಸನ್ನು ಅರಿತಿದ್ದರಿಂದ ಅವಳಿಗೆ ವಿರೋಧವಾಗಿ ನಡೆಯಲಿಲ್ಲ. ಆದರೆ ಅತ್ತೆಯ ಕಾಟ ದಿನೇ ದಿನೇ ಹೆಚ್ಚಾಗತೊಡಗಿತು. ಕೊನೆಗೊಮ್ಮೆ ಗಿರಿಯಮ್ಮನೆ ಸ್ವತಃ ತಿಪ್ಪರಸನಿಗೆ ಕನ್ಯೆ ಹುಡುಕಿ ಎರಡನೆಯ ಮದುವೆ ಮಾಡಿಸಿದಳು.
[ಬದಲಾಯಿಸಿ] ಸಾಧನಾ ಪಥ
ಗಿರಿಯಮ್ಮನ ಸಾಧನೆ ಮುಂದುವರಿಯುತ್ತಿದ್ದಂತೆ ಹೆಳವನಕಟ್ಟೆಗೆ ರಂಗನಾಥಸ್ವಾಮಿಯ ದರ್ಶನಕ್ಕೆ ಬರುತ್ತಿದ್ದವರು ಈಕೆಯ ಭಕ್ತರಾಗತೊಡಗಿದರು. ಗಿರಿಯಮ್ಮನ ಕರುಣೆಯಿಂದ ಅನೇಕ ಜನರಿಗೆ ರೋಗನಿವಾರಣೆ ಮೊದಲಾದ ಪರಿಹಾರ ದೊರೆಯತೊಡಗಿದವು.
ಮೊದಲೊಮ್ಮೆ ಉಡುಪಿಗೆ ಹೋಗುತ್ತಿದ್ದಾಗ ದರ್ಶನವಿತ್ತ ಗೋಪಾಲದಾಸರು ಮತೊಮ್ಮೆ ಅದೇ ಮಾರ್ಗವಾಗಿ ಉಡುಪಿಗೆ ಹೋಗುತ್ತಿರುವಾಗ ಗಿರಿಯಮ್ಮನಿಗೆ ಬಾಲಗೋಪಾಲನ ವಿಗ್ರಹ ನೀಡಿ ಆಶೀರ್ವದಿಸಿದರು. “ಹೆಳವನಕಟ್ಟೆ ರಂಗ”ನ ಅಂಕಿತದಲ್ಲಿ ದೇವರ ನಾಮಗಳನ್ನು ರಚಿಸಲು ಸೂಚಿಸಿದರು.
ಮಂತ್ರಾಲಯದ ಮಠಾಧೀಶ್ವರರಾದ ಶ್ರೀ ಸುಮತೀಂದ್ರರು ಮಲೇಬೆನ್ನೂರಿಗೆ ಬಂದಾಗ ಗಿರಿಯಮ್ಮನ ಕೆಲವು ವಿರೋಧಿಗಳು ಇವಳಿಗೆ ಸ್ವಾಮಿಗಳು ತೀರ್ಥ ಕೊಡಲು ವಿರೋಧಿಸಿದ್ದರು. ಸ್ವಾಮಿಗಳು ಅದನ್ನು ಲೆಕ್ಕಿಸದೆ ಗಿರಿಯಮ್ಮನಿಗೆ ಮರ್ಯಾದೆ ನೀದಿದರು.
[ಬದಲಾಯಿಸಿ] ಪವಾಡಗಳು
ರಂಗನಾಥಸ್ವಾಮಿಯ ಬೆರಳ ಉಂಗುರ ಕಾಣೆಯಾದಾಗ ಗುಬ್ಬಿಯ ಮೂಲಕ ಅದನ್ನು ಮರಳಿ ಪಡೆದದ್ದು , ಮೃತ ಶಿಶುವನ್ನು ಬದುಕಿಸಿದ್ದು , ಕುರುಡು ಬಾಲಕನಿಗೆ ದೃಷ್ಟಿದಾನ ಮಾಡಿದ್ದು ಮೊದಲಾದ ಪವಾಡಗಳನ್ನು ಗಿರಿಯಮ್ಮ ಮಾಡಿದ್ದಾಗಿ ಹೇಳಲಾಗುತ್ತಿದೆ. ಆ ಪ್ರದೇಶದಲ್ಲಿ ಒಮ್ಮೆ ಭೀಕರ ಬರಗಾಲ ಬಿದ್ದದ್ದು ಅವಳ ಒಂದು ಹಾಡಿನಲ್ಲಿ ಗೊತ್ತಾಗುತ್ತದೆ. ಆ ಹಾಡಿನ ನಂತರದಲ್ಲಿ ಮಳೆಯಾಯಿತೆಂದು ಹೇಳುತ್ತಾರೆ.
[ಬದಲಾಯಿಸಿ] ಜಲಸಮಾಧಿ
ಹೊನ್ನಾಳಿಗೆ ಸಮೀಪವಾಗಿ ತುಂಗಭದ್ರಾ ನದಿಯ ದಂಡೆಯ ಮೇಲೆ ಕಮ್ಮಾರಗಟ್ಟೆ ಎನ್ನುವ ಗ್ರಾಮವಿದೆ. ಒಂದು ಶ್ರಾವಣ ಶುದ್ಧ ಪಂಚಮಿಯ ದಿನ ಗಿರಿಯಮ್ಮ ತುಂಗಾ ಪ್ರವಾಹದಲ್ಲಿಳಿದು ಜಲಸಮಾಧಿ ಹೊಂದಿದಳು. ಆ ಸ್ಥಳದಲ್ಲಿ ನದಿಗೆ ಸೋಪಾನವನ್ನೂ , ಮಾರುತಿ ದೇವಸ್ಥಾನವನ್ನೂ ಗಿರಿಯಮ್ಮನೆ ಕಟ್ಟಿಸಿದ್ದಳೆಂದು ಹೇಳಲಾಗುತ್ತಿದೆ.
[ಬದಲಾಯಿಸಿ] ಸಾಹಿತ್ಯ
ಕ್ರಿ.ಶ.೧೨೭೫ರ ಸುಮಾರಿನಲ್ಲಿ ನರಹರಿತೀರ್ಥರಿಂದ ಪ್ರಾರಂಭವಾದ ದಾಸಸಾಹಿತ್ಯದ ಪ್ರಾಚೀನ ಪರಂಪರೆ ಹೆಳವನಕಟ್ಟೆ ಗಿರಿಯಮ್ಮನವರೆಗೆ ನಡೆದುಕೊಂಡು ಬಂದಿತೆಂದು ಹೇಳಬಹುದು. ಗಿರಿಯಮ್ಮ ಅನೇಕ ದೇವರ ನಾಮಗಳನ್ನಲ್ಲದೆ, ಏಳು ವಿಶೇಷ ಕೃತಿಗಳನ್ನೂ ರಚಿಸಿದ್ದಾಳೆ.
- ಕೃಷ್ಣಕೊರವಂಜಿ
- ಬ್ರಹ್ಮಕೊರವಂಜಿ
- ಉದ್ದಾಳಿಕನ ಕಥೆ
- ಸೀತಾಕಲ್ಯಾಣ
- ಶಂಕರಗಂಡನ ಹಾಡು
- ಚಂದ್ರಹಾಸನ ಕಥೆ
ಟಿಪ್ಪಣಿ: ಹೆಳವನಕಟ್ಟೆ ಶ್ರೀ ಲಕ್ಷ್ಮೀರಂಗನಾಥ ದೇವಾಲಯವು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಮಾರನಹಳ್ಳಿಯಲ್ಲಿ ಇದೆ.
ವರ್ಗಗಳು: ಆಧ್ಯಾತ್ಮ | ಧರ್ಮ | ಹಿಂದೂ ಧರ್ಮ | ಕನ್ನಡ ಸಾಹಿತ್ಯ | ದಾಸ ಸಾಹಿತ್ಯ | ಲೇಖಕಿಯರು | ಸಾಹಿತಿಗಳು