ಲೋಕಸಭೆ
From Wikipedia
ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ರಾಜ್ಯಸಭೆ ಇನ್ನೊಂದು). ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ ೫೫೨ ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ ೫೩೦ ಸದಸ್ಯರು ಚುನಾಯಿತರಾಗುತ್ತಾರೆ. ೨೦ ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು. ಲೋಕಸಭೆಯ ಸದಸ್ಯರಾಗಲು ಕನಿಷ್ಠ ೨೫ ವರ್ಷ ವಯಸ್ಸಾಗಿರಬೇಕು.
ಲೋಕಸಭೆಯ ಸಾಮಾನ್ಯ ಅವಧಿ ಐದು ವರ್ಷಗಳು. ಐದು ವರ್ಷಗಳ ನಂತರ ಮತ್ತೊಮ್ಮೆ ಚುನಾವಣೆಗಳು ನಡೆಯುತ್ತವೆ. ತುರ್ತು ಪರಿಸ್ಥಿತಿಯಿದ್ದಲ್ಲಿ ಚುನಾವಣೆಗಳನ್ನು ಮುಂದೂಡಬಹುದು. ಹಾಗೆಯೇ ಅವಧಿ ಮುಗಿಯುವ ಮುನ್ನ ಸರ್ಕಾರ ಬಹುಮತ ಕಳೆದುಕೊಂಡಲ್ಲಿ ಮತ್ತೊಮ್ಮೆ ಚುನಾವಣೆಗಳು ನಡೆಯಬೇಕಾಗಬಹುದು. ೧೪ ನೆಯ ಲೋಕಸಭೆ ಮೇ, ೨೦೦೪ ರಲ್ಲಿ ಸೇರಿತು.
ಪ್ರತಿ ರಾಜ್ಯದಿಂದ ಇರುವ ಲೋಕಸಭಾ ಸದಸ್ಯರ ಸಂಖ್ಯೆ ಆ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈಗಿನ ಹಂಚಿಕೆ ಹೀಗಿದೆ (೫೪೫ ಸದಸ್ಯರು: ೫೪೩ ಚುನಾಯಿತ + ೨ ನೇಮಿತ):
ರಾಜ್ಯಗಳು:
- ಆಂಧ್ರ ಪ್ರದೇಶ - ೪೨
- ಅರುಣಾಚಲ ಪ್ರದೇಶ - ೨
- ಅಸ್ಸಾಮ್ - ೧೪
- ಬಿಹಾರ - ೪೦
- ಚತ್ತೀಸ್‌ಗಢ - ೧೧
- ಗೋವ - ೨
- ಗುಜರಾತ್ - ೨೬
- ಹರ್ಯಾಣಾ - ೧೦
- ಹಿಮಾಚಲ ಪ್ರದೇಶ - ೪
- ಜಮ್ಮು ಮತ್ತು ಕಾಶ್ಮೀರ - ೬
- ಜಾರ್ಖಂಡ್ - ೧೪
- ಕರ್ನಾಟಕ - ೨೮
- ಕೇರಳ - ೨೦
- ಮಧ್ಯ ಪ್ರದೇಶ - ೨೯
- ಮಹಾರಾಷ್ಟ್ರ - ೪೮
- ಮಣಿಪುರ - ೨
- ಮೇಘಾಲಯ - ೨
- ಮಿಜೋರಮ್ - ೧
- ನಾಗಾಲ್ಯಾಂಡ್ - ೧
- ಒರಿಸ್ಸಾ - ೨೧
- ಪಂಜಾಬ್ - ೧೩
- ರಾಜಸ್ಥಾನ - ೨೫
- ಸಿಕ್ಕಿಮ್ - ೧
- ತಮಿಳುನಾಡು - ೩೯
- ತ್ರಿಪುರಾ - ೨
- ಉತ್ತರ ಪ್ರದೇಶ - ೮೫
- ಉತ್ತರಾಂಚಲ - ೫
- ಪಶ್ಚಿಮ ಬಂಗಾಳ - ೪೨
ಕೇಂದ್ರಾಡಳಿತ ಪ್ರದೇಶಗಳು
- ಅಂಡಮಾನ್ ಮತ್ತು ನಿಕೋಬಾರ್ - ೧
- ಚಂಡೀಗಢ - ೧
- ದಾದ್ರಾ ಮತ್ತು ನಗರ್ ಹವೇಲಿ - ೧
- ಡಾಮನ್ ಮತ್ತು ಡಿಯು - ೧
- ದೆಹಲಿ - ೭
- ಲಕ್ಷದ್ವೀಪ - ೧
- ಪಾಂಡಿಚೆರಿ - ೧
[ಬದಲಾಯಿಸಿ] ಕೆಲಸ
ಲೋಕಸಭೆಯ ಸದಸ್ಯರು ಒಬ್ಬರನ್ನು "ಸ್ಪೀಕರ್" ಆಗಿ ಚುನಾಯಿಸುತ್ತಾರೆ. ಲೋಕಸಭೆಯ ಕಾರ್ಯ ಸರಾಗವಾಗಿ ಸಾಗುವಂತೆ ನೋಡಿಕೊಳ್ಳುವುದು ಸ್ಪೀಕರ್ ರ ಮುಖ್ಯ ಕೆಲಸ. ಸ್ಪೀಕರ್ ಅವರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಡೆಪ್ಯುಟಿ ಸ್ಪೀಕರ್ ನಿರ್ವಹಿಸುತ್ತಾರೆ.
ಸಾಮಾನ್ಯ ದಿನಗಳಲ್ಲಿ ಲೋಕಸಭೆ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ಒಂದರವರೆಗೆ, ಮತ್ತೆ ಮಧ್ಯಾಹ್ನ ಎರಡರಿಂದ ಸಂಜೆ ಆರರ ವರೆಗೆ ಸೇರುತ್ತದೆ. ಮೊದಲ ಒಂದು ಘಂಟೆ ಪ್ರಶ್ನೋತ್ತರಗಳಿಗೆ ಮೀಸಲಾಗಿಡಲಾಗಿರುತ್ತದೆ.
ಭಾರತ ಸರ್ಕಾರದ ಶಾಸಕಾಂಗದ ಇನ್ನೊಂದು ಸಭೆ ರಾಜ್ಯಸಭೆ. ಯಾವುದೇ ಮಸೂದೆಗೆ ಲೋಕಸಭೆ ಒಪ್ಪಿಗೆ ಇತ್ತ ನಂತರ ಅದು ರಾಜ್ಯಸಭೆಗೆ ಹೋಗುತ್ತದೆ. ರಾಜ್ಯಸಭೆಯೂ ಒಪ್ಪಿದ ನಂತರ ಈ ಮಸೂದೆ ಕಾಯಿದೆಯಾಗುತ್ತದೆ. ಹಣಕಾಸಿಗೆ ಸಂಬಂಧಪಟ್ಟ ಮಸೂದೆಗಳ ವಿಷಯದಲ್ಲಿ ಮಾತ್ರ ರಾಜ್ಯಸಭೆಯ ಮಂಜೂರಾತಿ ಅಗತ್ಯವಿಲ್ಲ.