ಸರ್ವಜ್ಞ
From Wikipedia
ಸರ್ವಜ್ಞ, ಕನ್ನಡದಲ್ಲಿ ತ್ರಿಪದಿಗಳೆ೦ಬ ಮೂರು ಸಾಲಿನ ವಚನಗಳನ್ನು ಬರೆದ ಪ್ರಸಿದ್ಧ ಕವಿ.
ಸರ್ವಜ್ಞ ಜೀವಿಸಿದ್ದ ಕಾಲವನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿ೦ದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿ೦ದ ಅವನು ಜೀವಿಸಿದ್ದ ಕಾಲ ಸುಮಾರಾಗಿ ೧೭ ನೇ ಶತಮಾನದ ಆದಿಭಾಗ ಎ೦ದು ಪ್ರತಿಪಾದಿಸಲಾಗಿದೆ. ಸರ್ವಜ್ಞನ ಕೆಲವು ಬರಹಗಳಿ೦ದ ಆತನ ನಿಜವಾದ ಹೆಸರು ಪುಷ್ಪದತ್ತ ಎ೦ದು ಊಹಿಸಲಾಗಿದೆ. "ಸರ್ವಜ್ಞ" ಅವನ ಕಾವ್ಯನಾಮ.
ಒಟ್ಟು ಸುಮಾರು ೧೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನ೦ತರದ ಕಾಲದಲ್ಲಿ ಬೇರಬೇರೆ ಲೇಖಕರಿ೦ದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿ೦ದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ. ಸರ್ವಜ್ಞನ ತ್ರಿಪದಿಗಳಲ್ಲಿ ಒ೦ದು ಉದಾಹರಣೆ:
"ಸರ್ವಜ್ಞನೆ೦ಬುವನು ಗರ್ವದಿ೦ದಾದವನೆ? ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯಾ ಪರ್ವತವೆ ಆದ ಸರ್ವಜ್ಞ||"
ಇನ್ನೊಂದು ವಚನ:
ಸಾಲವನು ಕೊಂಬಾಗ ಹಾಲೋಗರುಂಡಂತೆ| ಸಾಲಿಗರು ಬಂದು ಎಳೆವಾಗ ಕಿಬ್ಬದಿಯ| ಕೀಲು ಮುರಿದಂತೆ ಸರ್ವಜ್ಞ||
ಸರ್ವಜ್ಞನು ಹಿರೇಕೆರೂರು ತಾಲೂಕಿನ ಮಾಸೂರಿನಲ್ಲಿ(ಮದಗ ಮಾಸೂರು) ಜನಿಸಿದ್ದನೆಂದು ಐತಿಹ್ಯವಿದೆ. ಕರ್ನಾಟಕದ ಇಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಇತ್ತೀಚೆಗೆ ಮಾಸೂರಿಗೆ ಭೆಟ್ಟಿ ಕೊಟ್ಟಾಗ ಅಲ್ಲಿ ಒಂದು ಸರ್ವಜ್ಞನ ಸ್ಮಾರಕ ನಿರ್ಮಾಣ ಮಾಡಲಾಗುವದೆಂದು ಘೋಷಿಸಿದ್ದಾರೆ.
ಕನ್ನಡದಲ್ಲಿ ಸರ್ವಜ್ಞನನ್ನು ಕುರಿತು "ಸರ್ವಜ್ಞಮೂರ್ತಿ" ಎಂಬ ಚಲನಚಿತ್ರ ಬಹಳ ಹಿಂದೆಯೇ ತಯಾರಾಗಿದೆ.